ಜಠರಗಲ್ಲು
-ಜಠರದಲ್ಲಿ ಕಲ್ಲಿನಂತೆ ಗಡುಸಾಗಿ ಮೈದಳೆಯುವ ಬಲು ಅಪರೂಪದ ಅನೈಸರ್ಗಿಕ ವಸ್ತು (ಗ್ಯಾಸ್ಟ್ರೊಲಿತ್). ಸಾಮಾನ್ಯವಾಗಿ ಕ್ಯಾಲ್ಸಿಯಮ್ ಲವಣಗಳ ಒಗ್ಗೂಡಿಕೆಯಿಂದ ಈ ಕಲ್ಲು ಉತ್ಪನ್ನವಾಗುವುದು. ಆದರೆ ವ್ಯಕ್ತಿ ಆರೋಗ್ಯವಂತನಾಗಿರುವಾಗ ಆತನ ಜಠರರಸದಲ್ಲಿರುವ ಹೈಡ್ರೊಕ್ಲೋರಿಕ್ ಆಮ್ಲ ಈ ಲವಣಗಳ ರೂಪಣವನ್ನು ತಟಸ್ಥೀಕರಿಸುತ್ತದೆ. ಆದ್ದರಿಂದ ಜಠರಗಲ್ಲು ಉಂಟಾಗಬೇಕಾದರೆ ಜಠರರಸದಲ್ಲಿ ಆಮ್ಲ ಪೂರ್ಣವಾಗಿ ಲೋಪಗೊಂಡಿರಬೇಕು ಮತ್ತು ಅನಾರೋಗ್ಯ ಪರಿಸ್ಥಿತಿ ತಲೆದೋರಿರಬೇಕು. ಜಠರ ಗಲ್ಲುಗಳು ಜಠರದಲ್ಲಿದ್ದರೆ ಅವುಗಳ ಇರುವಿಕೆಯಿಂದಲೇ ನೋವು, ಹೊಟ್ಟೆ ಭಾರ, ರಕ್ತಸ್ರಾವ ಮುಂತಾದ ಅನೇಕ ಬಾಧೆಗಳುಂಟಾಗಬಹುದು. ಅಪರೂಪಕ್ಕೆ ಅಕಸ್ಮಾತ್ ಆಹಾರ ಪದಾರ್ಥಗಳೊಡನೆ ನುಂಗಿದ ಕಲ್ಲುಗಳೂ ಜಠರದಲ್ಲಿ ಕಂಡುಬರಬಹುದು. ಅಂತೇ ಪಿತ್ಥಕೋಶ ನಾಳಗಳ ಕಲ್ಲುಗಳು ಡುಯೋಡೀನಮ್ ಎಂಬ ಸಣ್ಣ ಕರುಳಿನ ಪ್ರಾರಂಭ ಭಾಗಕ್ಕೆ ಬಂದು ಅಲ್ಲಿಂದ ಜಠರದೊಳಕ್ಕೆ ಹಿನ್ನಡೆಯಾಗಿರಬಹುದು.
(ಆರ್.ಎಸ್.ವಿ.)
\	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ